ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಬ್ಬಿಂಗ್

ನಿನ್ನೆಗೆ ಬೆಂಗಳೂರಿನಲ್ಲಿ ನಡೆದ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊನೆಗೊಂಡಿತು. ಅದರ ಅಧ್ಯಕ್ಷರಾದ ಜಿ.ವೆಂಕಟಸುಬ್ಬಯ್ಯನವರು ಕೆಲವು ಮುಖ್ಯ ಮತ್ತು ಅತಿ ಮುಖ್ಯ ವಿಷಯಗಳನ್ನು ತಮ್ಮ ಹಲವಾರು ಭಾಷಣಗಳಲ್ಲಿ ಹೊರಹಾಕಿದ್ದಾರೆ. ಅದರಲ್ಲಿ ಒಂದು ಚಿತ್ರಗಳ ಡಬ್ಬಿಂಗ್ ಕುರಿತಾದ ಅವರ ನಿಲುವು ವಿಶೇಷವಾಗಿ ನನ್ನ ಗಮನ ಸೆಳೆಯಿತು. ಏಕೆಂದರೆ ೬+ ಕೋಟಿ ಕನ್ನಡಿಗರ ಭಾಷೆಯಾದ ಕನ್ನಡದ ಸಾಹಿತ್ಯ ಸಮ್ಮೇಳನವೊಂದರಲ್ಲಿ ಅಷ್ಟು ದೊಡ್ಡ ಜನಸಮೂಹದ ಎದುರು ನಿಂದು ಹೀಗೆ ಒಂದು ಜನಾಂಗದ ಮೇಲೆ ಹೇರಿಕೆಯ ಪ್ರವೃತ್ತಿಯನ್ನು ಎತ್ತು ಹಿಡಿಯುವ ಕೆಲಸಕ್ಕೆ ಕೈ-ಜೋಡಿಸಿರುವುದು ನನಗೆ ಅಷ್ಟು ಸರಿಯೆಂದು ಕಾಣಲಿಲ್ಲ.

ಚಿತ್ರ ಡಬ್ಬಿಂಗ್ ಬೇಡವಾದರೆ ಬೇರೆ ಡಬ್ಬಿಂಗ್ ಗಳೂ ಬೇಡ. ಅಲ್ವಾ?
ಜಿ.ವೆಂಕಟಸುಬ್ಬಯ್ಯನವರ ಪ್ರಕಾರ ಪರಭಾಷೆಯಿಂದ ಕನ್ನಡಕ್ಕೆ ಡಬ್ ಮಾಡುವುದು ನಿಲ್ಲಿಸಬೇಕಂತೆ.
(೧) ಮೊದಲಿಗೆ ಡಬ್ಬಿಂಗನ್ನು ತಡೆಯಲು ಯಾರಿಗಾದರು ಹಕ್ಕು ಕೊಟ್ಟವರು ಯಾರು, ಯಾವಾಗ? ಒಂದು ಚಿತ್ರವನ್ನು ಡಬ್ ಮಾಡಬೇಕಾದರೆ ಅದಕ್ಕೆ ಸಂಬಂಧಿಸಿದಂತೆ ಹಕ್ಕು ಕೊಡುವವರು ಕೇವಲ ಆ ಮೂಲ ಚಿತ್ರವನ್ನು ತೆಗೆದವರು. ಡಬ್ಬಿಂಗ್ ಮಾಡದಿರಲು ಹೇಳಲು ಯಾರಿಗೂ ಯಾಕೆ ಹಕ್ಕು ಇದೆ? Censor ಬೋರ್ಡಿನೋರನ್ನು ಬಿಟ್ಟು!!

(೨) ಎರಡನೆಯದಾಗಿ, ಇಂದಿಗೂ ನಮ್ಮ ಎಲ್ಲಾ ಟೀ.ವಿ ವಾಹಿನಿಗಳಲ್ಲಿ ಬರುವ ಜಾಹಿರಾತುಗಳನ್ನು ನೋಡಿ - ಎಲ್ಲವೂ ಬೇರೊಂದು ಭಾಷೆಯಿಂದಲೇ ಡಬ್ ಆಗಿ ಬರುತ್ತವೆ. ಹಾಗಾದರೆ ಈ ಡಬ್ಬಿಂಗುಗಳನ್ನೂ ನಿಲ್ಲಿಸಬೇಡವೇ? ಆದರೆ ಬೇರೆಡೆ ಜಿ.ವೆಂ ಅವರೇ ಹೇಳುವ ಹಾಗೆ ಬೇರೆ ಭಾಷೆಯ ಜಾಹಿರಾತನ್ನು ತಿರಸ್ಕರಿಸಿ, ಕನ್ನಡ ಜಾಹಿರಾತಿಗೆ ಒತ್ತಾಯಿಸಬೇಕಂತೆ. ಇವರ ಮಾತುಗಳನ್ನು ಹೇಗೆ ಅರ್ಥ ಮಾಡಿಕೊಳ್ಳೋದು ಸ್ವಾಮಿ? ಯಾವುದನ್ನು ಸರಿಯೆಂದುಕೊಳ್ಳಬೇಕು, ಯಾವುದನ್ನು ಸರಿಯಲ್ಲವೆಂದು ತೆಗೆದುಕೊಳ್ಳಬೇಕು??

ಬೇಡವೆನ್ನಲು ಕಾರಣವಾದರೂ ಏನು..?
ಡಬ್ಬಿಂಗ್ ಒಂದು ಕಲೆಯಲ್ಲವೆಂದು ಹೇಳುತ್ತಾರೆ ಜಿ.ವೆಂ ಅವರು. ಅದೇ ಕಾರಣದಿಂದ ಅದನ್ನು ನಿಷೇಧಿಸಬೇಕಂತೆ. ಅಂದರೆ ಇವರ ಪ್ರಕಾರ ಚಿತ್ರವೊಂದರಲ್ಲಿ ಕಲೆಯಲ್ಲದ ಯಾವ ಭಾಗವೂ ಇರಕೂಡದು. ಚಲನ ಚಿತ್ರವೊಂದರಲ್ಲಿ ಹಣಕಾಸಿನ ವ್ಯವಹಾರವೂ ಇರುತ್ತದೆ - ಅದನ್ನೂ ನಿಷೇಧಿಸೋಣವೇ? ಹಾಗಂತ ಡಬ್ಬಿಂಗೆನ್ನುವುದು ಕಲೆಯಲ್ಲವೆಂದು ಇಷ್ಟು ಹಗುರವಾಗಿ ಹೇಳಲು ಆಧಾರಗಳಾದರೂ ಏನಿಲ್ಲಿ? ಡಬ್ಬಿಂಗ್ ಅಂದರೆ ಏನು ಎಂದು ಇನ್ನೂ ಸ್ವಲ್ಪ ಕಾಲ ಯೋಚನೆ ಮಾಡಿದ್ದಿದ್ರೆ ಈ ರೀತಿ ಹೇಳುತ್ತಿರಲಿಲ್ಲವೇನೋ ಮಾನ್ಯರು. ಒಂದು ಭಾಷೆಯಲ್ಲಿ ಮಾಡಲಾಗಿರುವ ಚಲನ ಚಿತ್ರವಾಗಲಿ, ಜಾಹಿರಾತೂ ಆಗಲಿ ಸರಿಯಾಗಿ ನೋಡುಗರ ಮನಸ್ಸಿಗೆ ಅಷ್ಟೇ ಸರಿಯಾಗಿ ತಾಗಬೇಕೆಂದರೆ ಅದಕ್ಕೆ ಡಬ್ಬಿಂಗ್ ಮಾಡುವ ತಂಡದವರು ಕಲಾವಿದರಾಗಿಲ್ಲದೇ ಹೋದರೆ ಆಗದು. ಇದನ್ನು ಪರಿಗಣಿಸಬಹುದಾಗಿದೆ ಜಿ.ವೆಂ ಅವರು.

ಕಲೆಯಲ್ಲದಿದ್ದರೂ...
ಡಬ್ಬಿಂಗ್ ಒಂದು ’ಕಲೆ’ಯಲ್ಲದಿದ್ದರೂ ಅದು ಯಾವ ಕಲೆಯ ಉನ್ನತ ರೂಪ ಇಂದು ಕನ್ನಡ ಚಲನಚಿತ್ರೋದ್ಯಮದಲ್ಲಿ, ಕನ್ನಡ ಜಾಹಿರಾತಿನ ಉದ್ಯಮದಲ್ಲಿ ಇಲ್ಲವೋ, ಮತ್ತದರಿಂದ ಕನ್ನಡಿಗ ಚಿತ್ರ-ನೋಡುಗರು ಯಾವ ಕೊರತೆ ಅನುಭವಿಸುತ್ತಿರುವರೋ, ತಾತ್ಕಾಲಿಕವಾಗಿ ಆ ಕೊರತೆಯನ್ನು ತುಂಬುವ ಕೆಲಸವನ್ನಾದರು ಡಬ್ಬಿಂಗ್ ಮಾಡಬಹುದಾಗಿದೆ. ಕಲೆ ಮತ್ತು ಕಲಾವಿದರ ಗುರಿ ಕಲಾನುಭವಿಗಳ ಸುಖವೇ ಆಗಿದ್ದರೆ ಡಬ್ಬಿಂಗ್ ಅನ್ನು ಹೀಗೆ ವಿರೋಧಿಸುವುದಿಲ್ಲ. ಅದನ್ನು ಅಷ್ಟು ಕೇವಲವಾಗಿ ಅಂದು ಮಾತನಾಡುವುದು ಉನ್ನತ ಸ್ಥಾನವನ್ನು ಅಲಂಕರಿಸಿರುವ ಜಿ.ವೆಂ ಅವರಿಗಂತೂ ಖಂಡಿತವಾಗಿಯೂ ಸರಿಹೊಂದಲ್ಲ ಅಂತ ನನ್ನ ಭಾವನೆ. ಚಿತ್ರ ನೋಡುಗರು ಡಬ್ ಆದ ಚಿತ್ರವನ್ನು ಬಿಡುಗಡೆಗೊಳಿಸಿದರೆ ನೋಡುತ್ತಾರೋ ಇಲ್ಲವೋ ಎಂಬ ಮುಖ್ಯ ಪ್ರಶ್ನೆಯನ್ನೇ ಕೇಳಿಕೊಳ್ಳದೇ ಈ ರೀತಿ ಒಂದು ಕಲೆಯೂ ಆಗಿರುವ ಉದ್ಯಮದ ಮೇಲೆ ಹೀಗೆ ಗೂಬೆ ಕೂಡಿಸಿರುವುದು ಸರಿಯಲ್ಲವೆಂಬುದು ನನ್ನ ನಿಲುವಾಗಿದೆ.

0 comments

ನಿಮ್ಮ ಅನಿಸಿಕೆ ತಿಳಿಸಿರಿ: | Pass your comment: